ಎಲ್ಕ್‌ ಸಾರಗ: ಚಿಗರೆಗಳಲ್ಲೆಲ್ಲ ಅತಿದೊಡ್ಡ ಗಾತ್ರದ ಪ್ರಾಣಿ. ಸರ್ವಸ್ ಜಾತಿಗೆ ಸೇರಿದ ಈ ಪ್ರಾಣಿಯನ್ನು ಅಮೆರಿಕದಲ್ಲಿ ಮುಸು (ಮೂಸ್) ಎಂದೂ ಯುರೋಪಿನಲ್ಲಿ ಕೆಂಪು ಚಿಗರೆ ಎಂದೂ ಕಾಶ್ಮೀರದಲ್ಲಿ ಜಿಂಕೆಯೆಂದೂ ಹಿಮಾಲಯದಲ್ಲಿ ಸೌ ಎಂದೂ ಕರೆಯುತ್ತಾರೆ. ಉತ್ತರ ಅಮೆರಿಕದಲ್ಲಿ ಇದನ್ನು ವಾಪಿಟಿ ಎನ್ನುವರು. ಎಲ್ಕ್‌ ಎನ್ನುವುದು ಯುರೋಪಿನ ಹೆಸರು. ಮುಸು ವನ್ನು ಬಿಟ್ಟರೆ ಅಮೆರಿಕದ ಎಲ್ಕ್‌ ಅತಿ ದೊಡ್ಡ ಪ್ರಾಣಿ.

ತೋಳಿನ ಮಟ್ಟದಿಂದ ಲೆಕ್ಕ ಹಾಕಿದರೆ ಚೆನ್ನಾಗಿ ಬೆಳೆದ ಎಲ್ಕ್‌ 1.5ಮೀ ಎತ್ತರವಿದ್ದು 1500-2200 ಕೆಜಿ ತೂಕವಿರುತ್ತದೆ. ಚೆನ್ನಾಗಿ ಬೆಳೆದ ಕೊಂಬುಗಳು 1.5ಮೀ ಪಸರಿಸಿರುತ್ತವೆ. ಇದರ ಕಾಲುಗಳು ಉದ್ದ, ಕೊರಳು ಮೊಟಕು. ಮೇಲೊಸಡು ಗ್ರಾಹಶಕ್ತಿಯುಳ್ಳದ್ದಾಗಿ ನೇತು ಬಿದ್ದಿರುತ್ತದೆ. ಕಿವಿಗಳು ಉದ್ದನಾಗಿ ಜೋತುಬಿದ್ದಿರುತ್ತವೆ. ನೋಡಲು ಪ್ರಾಣಿ ಅಷ್ಟೇನೂ ಚನ್ನವಲ್ಲ. ಗಂಡಿನ ಕೂದಲು ಉದ್ದ, ಒರಟು, ಸ್ವಲ್ಪ ಪೆಡಸು.

ಈ ಮೃಗ ಜೌಗುಪ್ರದೇಶದಲ್ಲಾಗಲಿ, ಕುರುಚಲು ಅಥವಾ ದಟ್ಟ ಕಾಡಿನಲ್ಲಾಗಲಿ ಹಾಯಾಗಿರಬಲ್ಲುದು. ಕಾಡಿನ ಮತ್ತು ಜೌಗಿನ ಯಾವ ಅಡಚಣೆಗಳೂ ಇದಕ್ಕೆ ಲೆಕ್ಕವಿಲ್ಲ. ಶೀತಕಾಲದ ಅನ್ನಾಭಾವಕ್ಕೂ ಇದು ಹೆದರದು. ಆದ್ದರಿಂದ ತನ್ನ ಮೇಲೆ ಬೀಳಲು ಬರುವ ತೋಳ, ಲಿಂಕ್ಸ್‌, ಕರಡಿಗಳು ಮತ್ತು ಗ್ಲಟನ್ ಮುಂತಾದ ಪ್ರಾಣಿಗಳಿಂದಲೂ ಮನುಷ್ಯನಿಂದಲೂ ಇದು ಅತಿ ಜಾಣತನದಿಂದ ತಪ್ಪಿಸಿಕೊಳ್ಳುತ್ತದೆ. ತನ್ನ ಏಕಾಂತಭಂಗವನ್ನು ಇದು ಸಹಿಸದು. ಸುತ್ತುಗಟ್ಟಿದಾಗ ದಿಗ್ಭ್ರಮೆಗೊಳ್ಳುತ್ತದೆ. ಕೃಷಿಗಾಗಿ ಅರಣ್ಯ ನಾಶವಾಗಿ ಈ ಪ್ರಾಣಿ ಮಾಯವಾಗುತ್ತಿದೆ. ಯುರೋಪ್ ಖಂಡದಲ್ಲಿ ಇದು ಸ್ಕ್ಯಾಂಡಿನೇವಿಯ, ಪುರ್ವಪ್ರಷ್ಯ ಮತ್ತು ರಷ್ಯದ ಕೆಲವು ಭಾಗಗಳಲ್ಲಿದೆ. ಅಮೆರಿಕದಲ್ಲಿ ಅಲಾಸ್ಕದ ಹತ್ತಿರ ಕಾಣಬರುತ್ತದೆ. ಉದ್ದನಾದ ಕಾಲು ಮತ್ತು ಚಿಕ್ಕ ಕತ್ತು ಇರುವುದರಿಂದ ನೆಲದ ಮೇಲಿನ ಹುಲ್ಲನ್ನು ಮೇಯಲಾರದು, ಕೇವಲ ಮರದ ಕೆಳಗಿನ ಎಲೆ ಕೊನೆಗಳು, ಪೊದರುಗಳ ತುದಿಗಳು ಮತ್ತು ಉದ್ದವಾಗಿ ಬೆಳೆಯುವ ಹುಲ್ಲುಗಳನ್ನು ಮಾತ್ರ ಮುಟ್ಟಬಲ್ಲುದು. ಬರ್ಚ್, ವಿಲ್ಲೊ, ಆಸ್ಟೆನ್, ಪಾಪ್ಲರ್ ಮರಗಳ ಎಲೆ, ಕುಡಿ, ಕಲ್ಲುಹೂ ಮತ್ತು ಪಾಚಿ-ಮುಂತಾದವು ಇದರ ಮುಖ್ಯ ಆಹಾರ. ಬೇಸಿಗೆಯಲ್ಲಿ, ಮುಖ್ಯವಾಗಿ ಇರುಳಿನಲ್ಲಿ, ಇದು ಜೌಗು ಗುಂಡಿಗಳ ಕೆಸರಿನಲ್ಲಿ ಆಳಕ್ಕೆ ಮುಳುಗಿ ಅಲ್ಲಿ ಬೆಳೆದಿರುವ ಸಾರವತ್ತಾದ ನೀರಿನ ಗಿಡಗಳನ್ನು ಮೇಲೆತ್ತಿ, ಬೇರು ಸಹಿತ ಅವನ್ನು ಕೀಳಲು ನೀರಿನೊಳಕ್ಕೆ ಆಗಾಗ ತಲೆಯನ್ನು ಮುಳುಗಿಸುತ್ತ ಕಾಲ ಕಳೆಯುತ್ತದೆ.

ಎಲ್ಕ್‌ ಸಾರಗ ಎಷ್ಟು ಬಲಿಷ್ಠವೋ ಅಷ್ಟು ಧೈರ್ಯಶಾಲಿ. ಇದರ ಮೊನಚಾದ ಗೊರಸುಗಳು ಕೊಂಬುಗಳಿಗಿಂತ ಭಯಂಕರವಾದ ಆಯುಧ. ಎರಡನ್ನೂ ಅದು ತುಂಬ ಕೌಶಲದಿಂದ ಉಪಯೋಗಿಸಬಲ್ಲುದು.

ಗಂಡು ವಾಪಿಟಿ ತನ್ನ ಸುತ್ತ ಹೆಣ್ಣು ಜಿಂಕೆಗಳ ಒಂದು ಗುಂಪನ್ನು ಇಟ್ಟುಕೊಂಡು ಗುಂಪಿನ ಸ್ವಾಮ್ಯಕ್ಕಾಗಿ ಹೊಡೆದಾಡುತ್ತದೆ. ಅದೇ ಮುಸು ತನ್ನ ಏಕಾಕಿ ಸಂಗಾತಿಯೊಡನೆ ಸಂಸಾರ ಮಾಡುತ್ತದೆ. ಮೇ ತಿಂಗಳಲ್ಲಿ ಒಂದೊ ಅಥವಾ ಎರಡೋ ಮರಿಗಳು ಹುಟ್ಟುತ್ತವೆ; ಈಯುವುದಕ್ಕೆ ಮೊದಲು ಹೆಣ್ಣುಗಳು ಕೆರೆಯ ಅಥವಾ ನದಿಯ ನಡುಗಡ್ಡೆ, ಜೌಗು ಮುಂತಾದ ದುರ್ಗಮ ಪ್ರದೇಶಗಳನ್ನು ಹುಡುಕಿಕೊಳ್ಳುತ್ತವೆ. ಹುಟ್ಟಿದ ಕೆಲವೇ ತಾಸುಗಳಲ್ಲಿ ಮರಿ ಸ್ವತಂತ್ರವಾಗಿ ಓಡಾಡುತ್ತ ತಾಯನ್ನು ಹಿಂಬಾಲಿಸುತ್ತದೆ.	(ಎ.) 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ